ಕುರುಮಾಮ
ಕರ್ಣಾಟಕದ ಜನಪ್ರಿಯ ಭವಿಷ್ಯಕಾರರಿವರು.

ವೀರಗಚ್ಚೆಯನ್ನು ಬಿಗಿದು, ಎದೆಗೆ ಕಾವಿ ಬಟ್ಟೆಕಟ್ಟಿಕೊಂಡು ಇಲ್ಲವೆ ಅರೆದೋಳಿನ ಕರಿಯ ಕುಪ್ಪಸವನ್ನು ತೊಟ್ಟು, ಕೈಕಾಲುಗಳಿಗೆಲ್ಲ ಬಿಳಿ ಎಕ್ಕದ ಬೇರಿನ ಬಳೆಗಳನ್ನು ಹಾಕಿ, ಮುಡಿಯನ್ನು ಎತ್ತಿ ಮುಕುಟದಂತೆ ಬಿಗಿದುಕಟ್ಟಿ, ಮುಡಿ ಹಾಗೂ ಕೈಯ ಏಕನಾದಕ್ಕೆ ನವಿಲುಗರಿಯನ್ನು ಸಿಕ್ಕಿಸಿ, ಕವಡೆಯ ನಡುಪಟ್ಟಿಯನ್ನು ಸುತ್ತಿ, ಬಿಳಿಯ ನಾಮದ ಮೇಲೆ ಕೆಂಪುನಾಮ ಧರಿಸಿ, ಬಿದಿರಿನ ದಬ್ಬೆಗೆ ನಾಲ್ಕು ಪದರಿನ ಚೀಲವನ್ನು ನೇತುಹಾಕಿಕೊಂಡು, ಮತ್ತೊಂದು ಕೈಯಲ್ಲಿ ಏಕನಾದ ಹಿಡಿದು, ಕಿವಿಗಳಲ್ಲಿ ಚಂದ್ರಮುರಿ ಇಟ್ಟುಕೊಂಡು, ಬೆನ್ನಿಗೆ ಬತ್ತಳಿಕೆ ನೇತುಹಾಕಿಕೊಂಡು ಗಡ್ಡ ಮೀಸೆ ಹೊತ್ತು ಬರುವ ಇವರನ್ನು ಕಂಡಾಗ ತ್ರೇತಾಯುಗದ ದಂಡಕಾರಣ್ಯದಿಂದ ಒಮ್ಮೆಗೇ ಅವತರಿಸಿ ಬಂದಂತೆ ಭಾಸವಾಗುತ್ತದೆ. 

	ಕುರುಮಾಮ ಎಂದರೆ ಕುರುಹನ್ನು ತೋರಿಸುವ ವ್ಯಕ್ತಿ ಎಂದಾಗುತ್ತದೆ. ಯಾವ ವ್ಯಕ್ತಿಯೇ ಆಗಲಿ ಆತನ ಮನಸ್ಸಿನಲ್ಲಿರುವುದನ್ನು ಕುರುಮಾಮ ಬಿಡಿಸಿ ಹೇಳುವ ಶಾಸ್ತ್ರಕರನಾಗಿದ್ದಾನೆ.

	ಕುರುಮಾಮ ಜನಾಂಗದ ಮೂಲನಿವಾಸಿಗಳು ಆಂಧ್ರಪ್ರದೇಶದವರು, ಇವರ ಮಾತೃಭಾಷೆ ತೆಲಗು, ಬೆಜವಾಡ, ಶ್ರೀಶೈಲ, ಭದ್ರಾಚಲ, ಬಳ್ಳಾರಿ ಕಡೆಯಿಂದ ಕನ್ನಡನಾಡಿಗೆ ವಲಸೆಬಂದು ಅಲ್ಲಲ್ಲಿವರು ನೆಲೆಸಿದ್ದಾರೆ. ಜೀವನೋಪಾಯಕ್ಕಾಗಿ ಕನ್ನಡ ಭಾಷೆಯನ್ನು ಕಲಿತಿದ್ದಾರೆ. ಈ ವಂಶೀಕರ ಮೂಲಗುರುಗಳು ಶ್ರೀಶೈಲದವರು ಶ್ರೀಮಲ್ಲಿಕಾರ್ಜುನನ ಪರಮ ಭಕ್ತರಾಗಿದ್ದರು. ಒಮ್ಮೆ ಇವರ ಮೂಲವಂಶದವರು ಭದ್ರಾಚಲಕ್ಕೆ ಸಂದರ್ಶನ ನೀಡಿದಾಗ ಶ್ರೀರಾಮದಾಸರ ಸಂದರ್ಶನವಾದುದರ ಫಲವಾಗಿ ಶ್ರೀರಾಮನ ಭಕ್ತರಾಗಿ ಪರಿವರ್ತನೆಯಾದರೆಂತಲೂ ಅಂದಿನಿಂದ ಶ್ರೀರಾಮನ ಧ್ಯಾನದಲ್ಲಿ ತಲ್ಲೀನರಾಗಿ ಶ್ರೀರಾಮಮುಡಿಕಟ್ಟಿ, ಏಕನಾದ, ಚಿಟಿಕೆ ಹಿಡಿದು ಭವಿಷ್ಯಕಾರರಾಗಿವರು ಜೀವನ ನಡೆಸುತ್ತಿದ್ದಾರೆ.

	ಇವರು ಅಲೆಮಾರಿ ಪ್ರವೃತಿಯವರು. ಇವರ ಕುಲಕಸಬು ಭವಿಷ್ಯ ಹೇಳಿ ಭಿಕ್ಷೆ ಬೇಡಿ ಜೀವಿಸುವುದೇ, ಇದರ ಜೊತೆಗೆ ದನಕರು ಸಾಕುತ್ತಾರೆ. ಅವುಗಳ ಮೇಲೆ ತಮ್ಮ ಸಂಸಾರದ ಸಾಮಗ್ರಿ ಹೇರಿಕೊಂಡು ಹಳ್ಳಿಯಿಂದ ಹಳ್ಳಿಗೆ ಸಾಗುತ್ತಿರುತ್ತಾರೆ. ಊರ ಹೊರೆಗೆ ಚಾವಡಿಯಲ್ಲೋ ಇಲ್ಲವೆ ಮರದ ಕೆಳಗೋ ಇವರ ಬಿಡಾರ. ಗಂಡಸರು ಮಾತ್ರ ವೇಷಭೂಷಣಗಳಿಂದ ಅಲಂಕರಿಸಿಕೊಂಡು ಏಕನಾದ ಹಿಡಿದು ಮನೆಮನೆಗೂ ಹೋಗಿ ಭಿಕ್ಷೆ ಬೇಡುತ್ತಾರೆ. ಹೆಂಗಸರು ಭಿಕ್ಷೆ ಬೇಡುವುದಿಲ್ಲ. ಅಡಿಗೆ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದು, ದನಕರುಗಳಿಗೆ ಮೇವು ತರುವುದು ಇಷ್ಟು ಕೆಲಸ ಹೆಂಗಸರದಾಗುತ್ತದೆ. ಭಿಕ್ಷಾಟನೆ ಮುಗಿದ ಮೇಲೆ ಗಂಡಸರು ಬಿಡುವು ಮಾಡಿಕೊಂಡು ಸಮೀಪದ ತೊರೆ, ಕೆರೆ, ಇಲ್ಲವೇ ಬಾವಿಗಳಿಗೆ ಹೋಗಿ ಬಲೆಗಳ ಸಹಾಯದಿಂದ ಮೀನು ಹಿಡಿಯುತ್ತಾರೆ.
ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿದ್ದ ಈ ಜನಾಂಗದವರು ಮೊದಮೊದಲು ಬಿದರಗಂಜಿ, ಅಂಬಲಿ, ಜೊತೆಗೆ ಮಾಂಸ ಸೇವಿಸುತ್ತಿದ್ದರು. ಮೀನು, ಕುರಿ, ಮೇಕೆ, ಕೋಳಿಗಳ ಮಾಂಸವನ್ನು ಮಾತ್ರ ಇವರು ಉಪಯೋಗಿಸುತ್ತಾರೆ. ನವಿಲು, ಗಿಳಿ, ಪಾರಿವಾಳ, ಗರುಡ ಮುಂತಾದ ಪಕ್ಷಿಗಳ ಮಾಂಸವನ್ನು ಇವರೆಂದೂ ಮುಟ್ಟುವುದಿಲ್ಲ. ಸೇಂದಿ ಕುಡಿಯುವುದು ಇವರಿಗೆ ಮೊದಲಿನಿಂದಲೂ ಅಂಟಿಬಂದ ಒಂದು ಚಟ.

	ಇವರಲ್ಲೂ ಲಗ್ನ ಮುಂತಾದುವು ಸಾಮಾನ್ಯವಾಗಿ ಇತರ ಹಿಂದೂ ಪಂಗಡದವರಂತೆಯೇ ನಡೆಯುತ್ತವೆ. ತಾಳಿಕಟ್ಟಿ ಸರಳರೀತಿಯಲ್ಲಿ ಲಗ್ನಮಾಡಿ ಮುಗಿಸುವುದು ಇವರ ಕ್ರಮ. ಅಂದು ಮಾಂಸದ ವಿಶೇಷ ಊಟವಿರುತ್ತದೆ. ಜೊತೆಗೆ ಲಗ್ನಕ್ಕೆ ಬಂದವರಿಗೆಲ್ಲ ಸೇಂದಿಪಾನ ದೊರಕುತ್ತದೆ. ಅಂದು ರಾತ್ರಿ ಆ ಬಯಲಲ್ಲೆ ಪುಟ್ಟ ನೆರಕೆ ಕಟ್ಟಿ ಮರೆಮಾಡಿ ಗಂಡುಹೆಣ್ಣುಗಳನ್ನು ಬಿಟ್ಟು ನಿಷೇಕಪ್ರಸ್ತದ ಶಾಸ್ತ್ರವನ್ನು ಮುಗಿಸುತ್ತಾರೆ. ಇವರಲ್ಲಿ ಮೊದಮೊದಲು ಬಾಲ್ಯವಿವಾಹ ಪದ್ಧತಿ ಹೆಚ್ಚಾಗಿ ಆಚರಣೆಯಲ್ಲಿತ್ತು. ಇವರಲ್ಲಿ ಮೃತರಾದವರನ್ನು ಮಣ್ಣುಮಾಡುವುದು, ಸಮಾಧಿಗೆ ಹಾಲುತುಪ್ಪ ಎರೆಯುವುದು ಉಂಟು.

	ಅಲೆಮಾರಿಗಳಾದ ಇವರಿಗೆ ಈಗ ಮನೆಮಠಗಳೂ ಇವೆ. ಕೆಲವು ಕುಟುಂಬಗಳು ವ್ಯವಸಾಯದಲ್ಲಿ ತೊಡಗಿವೆ. ಮಕ್ಕಳಿಗೆ ವಿದ್ಯಾಭ್ಯಾಸ ಸಿಗುತ್ತಿದೆ. ಭವಿಷ್ಯ ಹೇಳುವ ಕುಲಕಸಬು ಮಾತ್ರ ಮುಂದುವರಿದು ಬರುತ್ತಿದೆ. ಹಸ್ತ ಸಾಮುದ್ರಿಕೆಯಲ್ಲಿ ಇವರದು ಎತ್ತಿದ ಕೈ. ವ್ಯಕ್ತಿಯ ಹೆಸರಿನ ಬಲದಿಂದಲೂ ಅವರವರ ಭವಿಷ್ಯವನ್ನಿವರು ನುಡಿಯುತ್ತಾರೆ. ವ್ಯಕ್ತಿಯ ಹಸ್ತರೇಖೆಗಳನ್ನು ಗಮನಿಸಿ ಮೊದಲು ಶ್ರೀರಾಮನ ನಾಮವನ್ನು ನೆನೆದು ಕೈಯಲ್ಲಿರುವ ಏಕನಾದವನ್ನು ನುಡಿಸಿಕೊಂಡು-
ರಾಮನಂದಂ, ರಾಮನಂದಂ, ಮಸ್ತಾನನ್ನ ಗುರುನಾದನ್ನ, 

ಕೊಂಡದೇವತೆ, ಹೆಸರು ಯಾವುದು ಮಾಮ ನಿನ್ನದು-ಎಂದು ಕುರು ಮಾಮ ಮೊದಲು ವ್ಯಕ್ತಿಯ ಹೆಸರನ್ನು ಕೇಳಿ ತಿಳಿದುಕೊಳ್ಳುತ್ತಾನೆ ಮತ್ತೆ ಉತ್ತರಿಸುತ್ತ ಹುಟ್ಟಿದಗಳಿಗೆ ಒಳ್ಳೆಯದು, ದೊಡ್ಡ ಗುಂಪಿನಲ್ಲಿ ಹುಟ್ಟಿದೆ, ದೊಡ್ಡ ಗುಂಪಿನಲ್ಲಿ ಬೆಳೆದೆ, ಗುಂಪಿನಲ್ಲಿ ಸುಖವಿಲ್ಲ, ಅಣ್ಣ ತಮ್ಮಂದಿರಲ್ಲಿ ಸುಖವಿಲ್ಲ, ತಾಯಿತಂದೆ ಕಟ್ಟಿದ ಮನೆಯಲ್ಲಿ ಸುಖವಿಲ್ಲ, ನೀರಲ್ಲಿನ ಕಂಟಕ ಕಳೆದು ಹೋಯ್ತು. ಈಗ ಮುಂದುಹೋಗುವ ಪಯಣ ವಳ್ಳೇದುಂಟು. ಲಾಭವಾಗ್ತದೆ. ಗೋವು ಸಂಬಂಧವಾಗಿ ವಳ್ಳೆಯದು. ಭೂಮಿಯಲ್ಲಿ ಜಯವಾಗುತ್ತೆ, ಕುರಿತ ಕಾರ್ಯಕ್ರಮಗಳೆಲ್ಲ ಜಯವಾಗುತ್ತೆ ಕುರ್‍ರ್...ಮಾಮ ಇನ್ನೇನು ಕೇಳ್ತೀರಿ ಇನ್ನೇನು ಇದ್ದರೂ ಕೇಳಬಹುದು - ಎಂದು ನುಡಿಯುತ್ತಾನೆ.

	ಕುರುಮಾಮ ಬರೀ ಭವಿಷ್ಯ ಹೇಳುವವ ಮಾತ್ರವಲ್ಲ ಒಳ್ಳೆಯ ವೈದ್ಯನೂ ಆಗಿರುತ್ತಾನೆ. ಇವನಲ್ಲಿ ನಾಲ್ಕು ಮೂಲೆಯ ಒಂದು ಚೀಲವಿರುತ್ತದೆ. ಅದರಲ್ಲಿ ಭವಿಷ್ಯ ಹೇಳಲು ಸಹಕಾರಿಯಾಗುವ ಸಚಿತ್ರ ಗ್ರಂಥವೇ ಮುಂತಾದ ಅನೇಕ ಚಿತ್ರ ವಸ್ತುಗಳು ಅಡಕವಾಗಿರುತ್ತವೆ. ದುಂಡಾಗಿ ಸುತ್ತಿದ ಬಿಳಿ ಎಕ್ಕದ ಬೇರಿನ ಒಂದು ಸಿಂಬೆ, ಕರಡಿಯ ಕಾಲಿನ ಪಂಜ, ಮೈವದನಿಕಿ, ತಾಂಮ್ರಸಿಖಿ, ಕಲ್ಲಂಭಿ, ಜಡಮೂಲಕಿ ಮುಂತಾದ ಗಿಡಮೂಲಿಕೆಗಳೂ ಇರುತ್ತವೆ. ಮಕ್ಕಳು ಹಲ್ಲು ಕಡಿಯುವುದಿದ್ದರೆ, ಬಾಲಗ್ರಹ, ನೆಲಗ್ರಹದ ಭೀತಿ ಇದ್ದರೆ ಅವೆಲ್ಲವನ್ನು ಈ ವಸ್ತುಗಳ ಬಳಕೆಯಿಂದ ಈತ ನಿವಾರಿಸುತ್ತಾನೆ. ಇಷ್ಟಲ್ಲದೆ ಭಂಗಿಸೊಪ್ಪಿನ ಚಿಲುಮೆ, ಅಡಿಕೆಲೆ ಚೀಲವೂ ಇವನಲ್ಲುಂಟು. ತಲೆಬಾಚುವ ಬಾಚಣಿಗೆಯೊಂದು ಅಲ್ಲಿ ಸೇರಿಕೊಂಡಿರುತ್ತದೆ.

	ಗ್ರಾಮಗಳಲ್ಲಿ ಇವರು ಮನೆಯಿಂದ ಮನೆಗೆ ಭಿಕ್ಷಾಟನೆಗೆ ಹೋಗುವಾಗ ಏಕನಾದ ಹಿಡಿದು ನುಡಿಸುತ್ತ ಕಾಯಿಲೆಯವರಿಗಾಗಿ

	ಹರಿಯೋ ಕಾಲ್ದಲ್ಲಿ ಒಂದು ಅಂಚಿಕಡ್ಡಿ
	ಕಳೆಯೋ ಕಾಲ್ದಲ್ಲಿ ಒಂದು ಹುಲ್ಲುಕಡ್ಡಿ
	ಮಾಡ್ತೀನಿ
	ಮಂಡಿ ಬಾದಿನಿ
	ಕೀಲು ಬಾದಿನಿ
	ಮುಂಗೈ ಬಾದಿನಿ 
	ತಲೆ ಬಾದಿನಿ
	ಮೂಗಿಲಿಪಡಿಸು 
	ನೆಗಡಿ ಕಮ್ಮಲು
ಏನಾರ ಇರಲಿ ... ... ಜೀವಸ್ಥಾನ ಜನ್ಮಸ್ಥಾನ ಹಿಡಿದು
	ಕಳೀತೀನಿ 
	ಹೊಟ್ಟೆಲಿ ಬಾಧಿ 
	ಸುಸ್ತಿ ಸಂಕಟ 
	ತಲೇಲಿ ಮಂಕು
	ಕಣ್ಣಲಿ ಮಂಜು
ಏನಿದ್ದರೂ ಪರಹಾರ ಆಗ್ತದೆ. 
	ಹಿಂದಿದ್ದ ಬಲಹೋಯ್ತು
	ಮುಂದಿದ್ದ ಸಿಂಗಾರ ಹೋಯ್ತು
	ಅದರಿಂದ ಕೊಂಚ ಕಷ್ಟ ಅದೆ ಕಳ್ಕೊಳ್ಳಿ 
ಮತ್ತೆ ಮತ್ತೆ ಕೇಳುವ ಹಿತವಾದ ಮಧುರವಾದ ಆ
	ನುಡಿಗಳ ಹಿನ್ನೆಲೆಯಲ್ಲಿ ಏಕನಾದ, ತಾಳಮೇಳ_
	ನೂರೊಂದು ಮೂಲಿಕೆ ಬೆರೆಸಿ
	ಅರಿಸಿನದ ಪುಡಿ ಆಗದೆ
	ಗಿಂಡಿ ನೀರಿಗೆ ಬೆರಸಿ, ಎಂಟುದಿನ ಕುಡಿಯಲಿ ಹರಿದೋಯ್ತದೆ
	ಹೀಗೆ ಕಾಯಿಲೆಯವರನ್ನು ಕುರುಮಾಮ ತನ್ನ ಚಮತ್ಕಾರದ ನುಡಿಗಳಿಂದ ಸಂತೈಸುತ್ತಾನೆ, ಗುಣಪಡಿಸುವ ಭರವಸೆ ನೀಡುತ್ತಾನೆ. 

	ಈ ಜನ ತಮ್ಮ ಕುಲಕಸಬನ್ನು ಮರೆಯುವ ಮೊದಲೆ ಇವರ ಸಾಹಿತ್ಯ, ವೈದ್ಯ, ಭವಿಷ್ಯದ ರೀತಿನೀತಿಗಳನ್ನು ಗುರುತಿಸಿಸುವ ಅಗತ್ಯವಿದೆ.										
	(ಪಿ.ಆರ್.ಟಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ